ಮೆನ್‍ಹೇಡನ್ -
ಕ್ಲೂಪಿಯಿಡೀ ಗುಂಪಿಗೆ ಸೇರಿದ ಬ್ರಿವೂರ್ಷಿಯ ಜಾತಿಯ ಮೀನು. ಅಮೆರಿಕದ ಅಟ್ಲಾಂಟಿಕ್ ಕರಾವಳಿಯಲ್ಲಿ ಕಾಣಬರುತ್ತದೆ. ಇದನ್ನು ಪೊಗಿ, ಮೊಸ್‍ಬಂಕರ್, ಬಗ್‍ಹೆಡ್, ಫ್ಯಾಟ್‍ಬ್ಯಾಕ್, ಬೆಎಲ್‍ವೈಫ್ ಎಂದೂ ಕರೆಯುತ್ತಾರೆ. ಸಾರ್ಡಿನ್, ಎಲ್‍ವೈಫ್, ಹೆರ್ರಿಂಗ್ ಶಾಡ್‍ಗಳಿಗೆ ಬಹಳ ಸಮೀಪದ ಸಂಬಂಧಿ. ದೊಡ್ಡ ಗುಂಪುಗಳಲ್ಲಿ ಸಂಚರಿಸುತ್ತದೆ. ದೇಹದ ಉದ್ದ ಸುಮಾರು 30 - 40 ಸೆಂಮೀ, ತೂಕ 0.5 ಕೆ.ಜಿ. ದೇಹ ನೀಲಿ ಬಣ್ಣದ್ದು. ಇವು ವಲಸೆ ಹೋಗುವ ಪರಿಪಾಟ ತೋರುತ್ತದೆ. ಅಧಿಕ ಸಂಖ್ಯೆಯಲ್ಲಿ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯಿಟ್ಟ 2 ದಿವಸಗಳ ತರುವಾಯ ಮರಿ ಹೊರಬರುವುವು. ಮರಿಗಳ ಬೆಳೆವಣಿಗೆ ಶೀಘ್ರಗತಿಯದು, 3 ವರ್ಷಗಳಲ್ಲಿ ಪ್ರೌಢಾವಸ್ಥೆಗೆ ಬರುವುವು. ಕಾಡ್, ಶಾರ್ಕ್ ಮೀನುಗಳೂ ಕಡಲಹಕ್ಕಿ ಮತ್ತು ತಿಮಿಂಗಿಲಗಳೂ ಇದರ ಸಹಜ ವೈರಿಗಳು. ಮೆನ್‍ಹೇಡನ್ ಮೀನಿಗೆ ವಾಣಿಜ್ಯ ಪ್ರಾಮುಖ್ಯ ಉಂಟು. ಮೀನೆಣ್ಣೆ, ಗೊಬ್ಬರ, ಸಾಬೂನು ಮತ್ತು ಮೀನಿನ ಪುಡಿ ತಯಾರಿಕೆಗೆ ಇದು ಬಳಕೆಯಾಗುತ್ತದೆ.
										(ಎಂ.ಎ.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ